ನೆವಾಡ -
	ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಶ್ಚಿಮಭಾಗದಲ್ಲಿರುವ ಒಂದು ರಾಜ್ಯ, ಉ.ಅ. 35( - 42( ಮತ್ತು ಪ. ರೇ. 114(2' - 12(0' ನಡುವೆ ಇದು ಹಬ್ಬಿದೆ. ರಾಜ್ಯದ ಪಶ್ಚಿಮ ಭಾಗದಲ್ಲಿರುವ ಸಿಯೆರ ನೆವಾಡ ಪರ್ವತದಿಂದಾಗಿ ಇದಕ್ಕೆ ನೆವಾಡ ಎಂಬ ಹೆಸರು ಬಂದಿದೆ. ಇದರ ಜನಪ್ರಿಯ ಹೆಸರುಗಳು ಸಿಲ್ವರ್ ಸ್ಟೇಟ್ ಮತ್ತು ಸೇಜ್‍ಬ್ರಷ್ ಸ್ಟೇಟ್. ಇದು 1864ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ 36ನೆಯ ರಾಜ್ಯವಾಯಿತು. ಈ ರಾಜ್ಯದ ಉತ್ತರದಲ್ಲಿ ಆರಿಗನ್ ಮತ್ತು ಇಡಹೋ, ಪೂರ್ವದಲ್ಲಿ ಯೂಟಾ, ಆಗ್ನೇಯದಲ್ಲಿ ಆರಿಜೋನ ಮತ್ತು ಪಶ್ಚಿಮ ಹಾಗೂ ನೈಋತ್ಯದಲ್ಲಿ ಕ್ಯಾಲಿಪೋರ್ನಿಯ ರಾಜ್ಯಗಳು ಇವೆ. ಸಂಯುಕ್ತ ಸಂಸ್ಥಾನಗಳ ರಾಜ್ಯಗಳ ಪೈಕಿ ಇದು ವಿಸ್ತೀರ್ಣದಲ್ಲಿ 7ನೆಯದು ಮತ್ತು ಜನಸಂಖ್ಯೆಯಲ್ಲಿ 47ನೆಯದು. ವಿಸ್ತೀರ್ಣ 2,86,299 ಚ.ಕಿಮೀ.; ಜನಸಂಖ್ಯೆ 4,88,738 (1970). ರಾಜಧಾನಿ ಕಾರ್ಸನ್ ನಗರ.

	ಭೌತಲಕ್ಷಣ: ನೆವಾಡದ ಹೆಚ್ಚಿನ ಭಾಗ ಗ್ರೇಟ್ ಬೇಸಿನ್ ಪ್ರದೇಶದಲ್ಲಿದ್ದು, ಕಡಿದಾದ ಪರ್ವತ ಪ್ರದೇಶಗಳಿಂದಲೂ ಸಮತಲವಾದ ಕಣಿವೆಗಳಿಂದಲೂ ಮರಳು ಗಾಡುಗಳಿಂದಲೂ ಕೂಡಿದೆ. 30ಕ್ಕೂ ಹೆಚ್ಚು ಪರ್ವತಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಾದುಹೋಗಿವೆ. ರಾಜ್ಯದ ನೈಋತ್ಯದಲ್ಲಿರುವ ಎಸ್ಮರಾಲ್ಡ ಕೌಂಟಿಯ ಬೌಂಡರಿ ಶಿಖರ (4,005 ಮೀ.) ಇಲ್ಲಿಯ ಅತ್ಯುನ್ನತ ಶಿಖರ. ಇನ್ನೊಂದು ಉನ್ನತ ಶಿಖರ ಹ್ವೀಲರ್ (3,981 ಮೀ.) ಕಾಲರ್ಯಾಡೋ ನದಿ ದಂಡೆಯ ಕಮ್ಮರಿ ಪ್ರದೇಶ (143 ಮೀ.) ಅತ್ಯಂತ ತಗ್ಗಿನ ನೆಲ. ರಾಜ್ಯದ ಸರಾಸರಿ ಎತ್ತರ 1,676 ಮೀ. ರಾಜ್ಯದ ದಕ್ಷಿಣ ಭಾಗ ಮಹಾವೆ ಮರುಭೂಮಿಯಲ್ಲಿದೆ.

	ರಾಜ್ಯದ ಎಲ್ಲ ನದಿಗಳೂ ಸರೋವರಗಳನ್ನು ಅಥವಾ ಅಳವಾದ ಕುಳಿಗಳನ್ನು ಸೇರುತ್ತವೆ. ರಾಜ್ಯದ ಅತ್ಯಂತ ದೊಡ್ಡ ನದಿ ಹಂಬೋಲ್ಟ್. 464 ಕಿಮೀ ಉದ್ದವಾಗಿರುವ ಈ ನದಿ ಪೂರ್ವದಿಂದ ಪಶ್ಚಿಮಕ್ಕೆ ಹರಿದು ಹಂಬೋಲ್ಟ್ ಸರೋವರವನ್ನು ಸೇರುತ್ತದೆ. ಇತರ ಪ್ರಮುಖ ನದಿಗಳು ಟ್ರಕೀ, ಕಾರ್ಸನ್ ಮತ್ತು ವಾಕರ್. ಇವು ನೀರಾವರಿಗೆ ಸಹಾಯಕವಾಗಿವೆ. ದಕ್ಷಿಣ ನೆವಾಡದಲ್ಲಿರುವ ಮಡೀ ಮತ್ತು ವರ್ಜಿನ್ ನದಿಗಳು ಕಾಲರ್ಯಾಡೋ ನದೀವ್ಯೂಹ್ಕಕೆ ಸೇರಿದವು. ರಾಜ್ಯದಲ್ಲಿ ಅನೇಕ ಸುಂದರ ಸರೋವರಗಳಿವೆ. ಇವುಗಳಲ್ಲಿ ಅತ್ಯಂತ ದೊಡ್ಡದು ಪಿರಮಿಡ್. ಇದು 48 ಕಿಮೀ. ಉದ್ದ ಮತ್ತು 6ರಿಂದ 21 ಕಿಮೀ. ಆಗಲವಿದೆ. ಇದರಲ್ಲಿಯ ಪಿರಮಿಡ್ ಆಕಾರದ ದ್ವೀಪಗಳನ್ನು ಕಂಡು ಜಾನ್ ಸಿ. ಫ್ರಿಮಾಂಟ್ ಇದಕ್ಕೆ ಈ ಹೆಸರು ನೀಡಿದ. ಇದೂ ವಿನಮಕ ಮತ್ತು ವಾಕರ್ ಸರೋವರಗಳೂ ಪ್ಲೀಸ್ಟೋಸೀನ್ ಯುಗದಲ್ಲಿದ್ದ, 21,504 ಚ.ಕಿಮೀ. ವಿಸ್ತೀರ್ಣವಾಗಿದ್ದ ಹಾಗೂ ಸುಮಾರು 1,15,200 ಚ. ಕಿಮೀ. ಜಲಾನಯನ ಪ್ರದೇಶದಿಂದ ಕೂಡಿದ್ದ ಲಾಹೊನ್ಟನ್ ಎಂಬ ಬೃಹತ್ ಸರೋವರದ ಅವಶೇಷಗಳಾಗಿವೆ. ಕ್ಯಾಲಿಪೊರ್ನಿಯ-ನೆವಾಡ ಗಡಿಯಲ್ಲಿರುವ ಟಾಹೋ ಸರೋವರ ನಿರ್ಮಲವಾಗಿ ಮನೋಹರವಾಗಿದೆ. ಇದರ 1/3ಭಾಗ ನೆವಾಡ ರಾಜ್ಯದಲ್ಲಿದೆ. ಇಲ್ಲಿಯ ಮತ್ತೊಂದು ಪ್ರಮುಖ ಸರೋವರ, ಹೂವರ್ ಕಟ್ಟೆಯ ಹಿಂಭಾಗದಲ್ಲಿ 187 ಕಿಮೀ. ದೂರಕ್ಕೆ ವ್ಯಾಪಿಸಿರುವ ಮೀಡ್, ರಾಜ್ಯದಲ್ಲಿ ಇಷ್ಟು ಆಗಾಧ ಜಲಸಂಪತ್ತಿದ್ದರೂ ರಾಜ್ಯದ ವಿಸ್ತೀರ್ಣಕ್ಕೆ ಹೋಲಿಸಿದರೆ ಇದರ ಜಲಾವೃತ ಪ್ರದೇಶ ಕಡಿಮೆಯೆಂದೇ ಹೇಳಬಹುದು. ನಗರಗಳು, ಕೈಗಾರಿಕೆಗಳು ಹಾಗೂ ವ್ಯವಸಾಯ ಕ್ಷೇತ್ರದ ಅಭಿವೃದ್ಧಿಗಾಗಿ ನೀರಿನ ಬಳಕೆ ಹೆಚ್ಚುತ್ತಿರುವುದರಿಂದ ಇಲ್ಲಿ ನೀರಿನ ಅಭಾವ ತಲೆದೋರುತ್ತಿದೆ.

	ವಾಯುಗುಣ: ಪಶ್ಚಿಮ ಗಡಿಯುದ್ದಕ್ಕೂ ಹಬ್ಬಿರುವ ಪರ್ವತ ಶ್ರೇಣಿಗಳು ಪೆಸಿಫಿಕ್ ಸಾಗರದಲ್ಲಿ ಹುಟ್ಟುವ ಮೋಡಗಳನ್ನು ನೆವಾಡಕ್ಕೆ ಬರುವ ಮೊದಲೇ ತಡೆದುಬಿಡುವುದರಿಂದ ರಾಜ್ಯದ ವಾಯುಗುಣ ಅರೆ-ಶುಷ್ಕವಾದ್ದು. ರಾಜ್ಯದ ಆಗ್ನೇಯ ಭಾಗ ಮತ್ತು ಕಾರ್ಸನ್ ಸಿಂಕ್ ಪ್ರದೇಶ ಅತ್ಯಂತ ಶುಷ್ಕವಾದವು. ಇಲ್ಲಿ ವಾರ್ಷಿಕ ಮಳೆಯ ಪರಿಮಾಣ 107 ಮೀ ಮೀ. ಗಳಿಗೂ ಕಡಿಮೆ. ಈಶಾನ್ಯಭಾಗದಲ್ಲಿ ಮಳೆಯ ವಾರ್ಷಿಕ ಸರಾಸರಿ 103 ಮಿಮೀ. 228 ಮಿಮೀ. ಇದ್ದರೆ ವಾಯುವ್ಯ ಭಾಗದ ಪರ್ವತಗಳಲ್ಲಿ 610 ಮಿಮೀ. ಇಲ್ಲಿಯ ಉಷ್ಣತೆಯೂ ವ್ಯತ್ಯಾಸವಾಗುತ್ತದೆ. ಉತ್ತರದಲ್ಲಿ ಸರಾಸರಿ ಉಷ್ಣತೆ ಜುಲೈಯಲ್ಲಿ 21(ಛಿ ಮತ್ತು ಜನವರಿಯಲ್ಲಿ -4( ಛಿ ದಕ್ಷಿಣ ಭಾಗದಲ್ಲಿ ಸರಾಸರಿ ಉಷ್ಣತೆ ಜುಲೈಯಲ್ಲಿ 30( ಛಿ ಮತ್ತು ಜನವರಿಯಲ್ಲಿ 4.5( ಛಿ ರಾಜ್ಯದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಚಳಿಗಾಲ ತೀವ್ರರೂಪದ್ದೂ ದೀರ್ಘ ಕಾಲದ್ದೂ ಆಗಿದ್ದು ಬೇಸಗೆ ಅಲ್ಪಕಾಲದ್ದೂ ಸೌಮ್ಯ ರೂಪದ್ದೂ ಆಗಿರುತ್ತವೆ.

	ಸಸ್ಯಪ್ರಾಣಿವರ್ಗ: ಇಲ್ಲಿಯ ಮರಳುಗಾಡು ಪ್ರದೇಶದಲ್ಲಿ ಮೆಸ್‍ಕ್ವೈಟ್, ಕ್ರಿಯೋಸೋಟ್ ಗ್ರೀಸ್‍ವುಡ್, ಯಕ್ಕ ಮತ್ತು 30ಕ್ಕೂ ಹೆಚ್ಚು ಬಗೆಯ ಕ್ಯಾಕ್ಟಸ್ ಗಿಡಗಳು ಬೆಳೆಯುತ್ತವೆ. ಎತ್ತರದ ಪ್ರದೇಶಗಳಲ್ಲಿ ಸೇಜ್‍ಬ್ರಷ್ ಮತ್ತು ಜೋಷ್ವಾಮರಗಳು ಬೆಳೆಯುತ್ತವೆ. ಪರ್ವತಗಳ ಮೇಲಿನ ಕಾಡುಗಳಲ್ಲಿರುವ ಮರಗಳು ತೈಲಪುರ್ನಿ, ತಾಳೇಶಪತ್ರೆ, ಸ್ಟ್ರೂಸ್, ಜುನಿಪರ್, ಮಹಾಗನಿ ಮುಂತಾದವು. ರಾಜ್ಯದಲ್ಲಿ ವಿಶೇಷವಾಗಿ ವಸಂತಕಾಲದಲ್ಲಿ 2,000ಕ್ಕೂ ಹೆಚ್ಚು ಬಗೆಯ ಕಾಡು ಹೂಗಳನ್ನು ಕಾಣಬಹುದು.

	ರಾಜ್ಯದಲ್ಲಿ ಲಾಂಗ್‍ಹಾರ್ನ್ ಜಾತಿಯ ಕುರಿಗಳು ಅನೇಕ ಬಗೆಯ ಜಿಂಕೆಗಳು, ಮೊಲಗಳು ಹೇರಳವಾಗಿವೆ. ಮರಳುಗಾಡು ಪ್ರದೇಶಗಳಲ್ಲಿ ಹಲ್ಲಿಯ ಜಾತಿಗೆ ಸೇರಿದ ಗೆಕೋ, ಕಾಡುಕಪ್ಪೆ, ಆಮೆ ಮತ್ತು ವಿಷಸರ್ಪಗಳಿವೆ. ಇಲ್ಲಿ ಉಷ್ಣತೆಯ ತೀವ್ರ ವೈಪರೀತ್ಯಕ್ಕೂ ಶುಷ್ಕ ಹವೆಗೂ ಹೊಂದಿಕೊಳ್ಳುವಂಥ ಪ್ರಾಣಿಗಳೇ ಇವೆ. ಸ್ಥಿರವಾಗಿ ನೆಲಸಿದ ಪಕ್ಷಿಗಳು ಹೆಚ್ಚು ಸಂಖ್ಯೆಯಲ್ಲಿಲ್ಲದಿದ್ದರೂ ವಲಸೆ ಬರುವ ಪಕ್ಷಿ ಸಂಕುಲಗಳು ಹೇರಳ. ನದಿಗಳು ಮತ್ತು ಸರೋವರಗಳಲ್ಲಿ ಅನೇಕ ಬಗೆಯ ಮೀನುಗಳೂ ಇತರ ಜಲಚರಗಳೂ ಇವೆ.

	ಇತಿಹಾಸ: ನೆವಾಡದಲ್ಲಿ 20,000 ವರ್ಷಗಳಿಗೂ ಹಿಂದೆ ಇಂಡಿಯನ್ ಬುಡ ಕಟ್ಟಿನವರ ವಸಾಹತುಗಳಿದ್ದುವೆಂಬುದಕ್ಕೆ ಆಧಾರಗಳಿವೆ. ಆ ಕಾಲದಲ್ಲಿ ಗುಹೆಗಳಲ್ಲಿ ವಾಸಿಸುತ್ತಿದ್ದ ಜನರು ದಕ್ಷಿಣ ನೆವಾಡದ ಬಂಡೆಗಳ ಮೇಲೆ ಚಿತ್ರಗಳನ್ನು ಕೊರೆದಿದ್ದಾರೆ. 1843-45ರಲ್ಲಿ ಜಾನ್ ಸಿ. ಫ್ರೆಮಾಂಟ್ ಈ ಪ್ರದೇಶವನ್ನು ಪರಿಶೋಧಿಸಿದ. ಚಿನ್ನದ ಹುಚ್ಚಿನಿಂದಾಗಿ ನೆವಾಡದ ಮೂಲಕ ಕ್ಯಾಲಿಪೋರ್ನಿಯಕ್ಕೆ ಜನರ ವಲಸೆ ಹೆಚ್ಚಾಯಿತು. 1848 ರಲ್ಲಿ ನೆವಾಡ ಮೆಕ್ಸಿಕೋವನ್ನು ತ್ಯಜಿಸಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸೇರಿತು. 1850ರ ವರೆಗೆ ಇದು ಕ್ಯಾಲಿಪೋರ್ನಿಯ ರಾಜ್ಯದ ಭಾಗವಾಗಿತ್ತು. 1850ರಲ್ಲಿ ಯೂಟಾ ರಾಜ್ಯ ಹೊಸದಾಗಿ ರಚಿತವಾದಾಗ ನೆವಾಡ ಅದರ ಭಾಗವಾಗಿ 1861ರ ವರೆಗೂ ಅದರಲ್ಲಿತ್ತು. ಇಲ್ಲಿ 1851ರಲ್ಲೇ ಮೊದಲನೆಯ ಶಾಶ್ವತ ವಸಾಹತು ಸ್ಥಾಪಿತವಾದರೂ 1859ರಲ್ಲಿ ಕಾಮ್‍ಸ್ಟಾಕ್ ಲೋಡ್ ಎಂಬ ಚಿನ್ನ ಬೆಳ್ಳಿ ಗಣಿಪ್ರದೇಶವನ್ನು ಕಂಡುಹಿಡಿಯುವ ವರೆಗೆ ಇದರ ಜನಸಂಖ್ಯೆ ಕಡಿಮೆಯಿತ್ತು. ಅನಂತರ ಇತರ ಪ್ರದೇಶಗಳಿಂದ ಜನರು ವಲಸೆ ಬರತೊಡಗಿದರು. ಜನಸಂಖ್ಯೆ ಬೆಳೆಯಿತು. 1861ರಲ್ಲಿ ನೆವಾಡ ಪ್ರತ್ಯೇಕ ಪ್ರದೇಶವಾಯಿತು. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ ಈ ಪ್ರದೇಶದ ಅಪಾರ ಖನಿಜ ಸಂಪತ್ತಿನಿಂದಾಗಿಯೂ ಗುಲಾಮಗಿರಿಗೆ ವಿರುದ್ಧವಾದ ಶಾಸನಗಳ ಜಾರಿಗೆ ಉತ್ತರದ ರಾಜ್ಯಗಳಿಗೆ ಬೆಂಬಲದ ಅವಶ್ಯಕತೆ ಇದ್ದುದರಿಂದಲೂ ಇದರ ಪ್ರಾಮುಖ್ಯ ಹೆಚ್ಚಾಯಿತು. ಒಂದು ರಾಜ್ಯವಾಗುವುದಕ್ಕೆ ಆಗತ್ಯವಾದ ಕನಿಷ್ಠ ಜನಸಂಖ್ಯೆಯ ಕೇವಲ 1/5ರಷ್ಟು ಇಲ್ಲಿದ್ದರೂ ಇದು ಪ್ರತ್ಯೇಕ ರಾಜ್ಯವಾಗಲು ಉತ್ತೇಜನ ನೀಡಲಾಯಿತು. 1863ರಲ್ಲಿ ಇಲ್ಲಿ ಸಂವಿಧಾನ ಸಭೆಯ ಮೊದಲ ಅಧಿವೇಶನ ನಡೆಯಿತು. 1864ರಲ್ಲಿ ಅಮೆರಿಕನ್ ಕಾಂಗ್ರೆಸ್ಸು ಇದರ ಸಂವಿಧಾನವನ್ನು ಒಪ್ಪಿ ಇದೊಂದು ರಾಜ್ಯವಾಗಿದ್ದ ಒಕ್ಕೂಟಕ್ಕೆ ಸೇರಲು ಅನುಮತಿ ನೀಡಿತು.

	ಆಡಳಿತ: ಇಲ್ಲಿಯ ಆಡಳಿತವ್ಯವಸ್ಥೆ 1864ರಲ್ಲಿ ಅಂಗೀಕೃತವಾದ ಸಂವಿಧಾನಕ್ಕೆ ಅನುಗುಣವಾಗಿದೆ. ಸಂವಿಧಾನವನ್ನು 1864ರಿಂದ ಈಚಿಗೆ 60ಕ್ಕೂ ಹೆಚ್ಚು ಬಾರಿ ತಿದ್ದು ಪಾಟು ಮಾಡಲಾಗಿದೆ. ಇಲ್ಲಿಯ ಕಾರ್ಯಾಂಗದ ಪ್ರಾಧಿಕಾರಿ ಗವರ್ನರ್. ಇವನನ್ನು ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆಯ ಮೂಲಕ ಆರಿಸಲಾಗುತ್ತದೆ. ಸೆನೇಟಿನಲ್ಲಿ 20 ಸದಸ್ಯರಿರುತ್ತಾರೆ. ಇವರು ನಾಲ್ಕು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ. ಪ್ರತಿನಿಧಿಸಭೆಯಲ್ಲಿ 40 ಜನ ಸದಸ್ಯರಿರುತ್ತಾರೆ. ಅವರಲ್ಲಿ ಅರ್ಧದಷ್ಟು ಸದಸ್ಯರಿರುತ್ತಾರೆ. ಅವರಲ್ಲಿ ಅರ್ಧದಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತಾರಾಗುತ್ತಾರೆ. ರಾಜ್ಯದಲ್ಲಿ 16 ಕೌಂಟಿಗಳಿವೆ. ಅವನ್ನು 58 ಉಪಕೌಂಟಿಗಳಾಗಿ ವಿಭಾಗ ಮಾಡಲಾಗಿದೆ. ಇವಲ್ಲದೆ 16 ನಗರಗಳೂ ಒಂದು ನಗರ ಕೌಂಟಿಯೂ (ಕಾರ್ಸನ್) ಇವೆ.

	ಜನಸಂಖ್ಯೆ: 1960ರಿಂದ 1970ರ ವರೆಗಿನ ಹತ್ತು ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಸೇ. 71.3 ರಷ್ಡು ಹೆಚ್ಚಿತು. ಇಲ್ಲಿಯ ಜನರಲ್ಲಿ ಸೇ. 80.9 ಮಂದಿ ನಗರವಾಸಿಗಳು. ರಾಜಧಾನಿ ಕಾರ್ಸನ್ ನಗರದ ಜನಸಂಖ್ಯೆ 15,468. ಇತರ ಪ್ರಮುಖ ನಗರಗಳು ಇವು: ಲಾಸ್ ವೇಗಸ್ (1,25,787), ರೀನೋ (72,860), ನಾರ್ತ್ ಲಾಸ್ ವೇಗಸ್ (36,216), ಸ್ಟಾಕ್ರ್ಸ್ (24,187) ಮತ್ತು ಹೆಂಡರ್‍ಸನ್ (16,395). 1970ರಲ್ಲಿ ಕ್ಲಾರ್ಕ್ ಮತ್ತು ವಾಷೋ ಇವೆರಡು ಕೌಂಟಿಗಳಲ್ಲೇ ರಾಜ್ಯದ ಒಟ್ಟು ಜನಸಂಖ್ಯೆಯ ಸೇ. 80ರಷ್ಟು ಜನ ವಾಸವಾಗಿದ್ದರು.

	ವಿದ್ಯಾಭ್ಯಾಸ: ಇಲ್ಲಿಯ ಸಾರ್ವಜನಿಕ ಶಾಲೆಗಳ ಆಡಳಿತವನ್ನು 8 ಜನ ಚುನಾಯಿತ ಸದಸ್ಯರಿರುವ ವಿದ್ಯಾಭ್ಯಾಸ ಮಂಡಲಿ ನಡೆಸುತ್ತದೆ. 7 ರಿಂದ 17 ವರ್ಷಗಳೊಳಗಿನ ಮಕ್ಕಳಿಗೆ ಶಾಲೆಯಲ್ಲಿ ಹಾಜರಾತಿ ಕಡ್ಡಾಯ. 1973-74ರಲ್ಲಿ ರಾಜ್ಯದಲ್ಲಿ 171 ಪ್ರಾಥಮಿಕ ಶಾಲೆಗಳೂ 74 ಸೆಕೆಂಡರಿ ಶಾಲೆಗಳೂ ಇದ್ದುವು. ನೆವಾಡ ವಿಶ್ವವಿದ್ಯಾಲಯ 1874ರಲ್ಲಿ ಎಲ್ಕೋದಲ್ಲಿ ಸ್ಥಾಪಿತವಾಯಿತು. 12 ವರ್ಷಗಳ ಅನಂತರ ಅದನ್ನು ರೀನೋಗೆ ಸ್ಥಳಾಂತರಿಸಲಾಯಿತು. 1951ರಲ್ಲಿ ಅದರ ವಿಸ್ತರಣ ವಿಭಾಗವೊಂದನ್ನು ಲಾಸ್ ವೇಗಸ್‍ನಲ್ಲಿ ಸ್ಥಾಪಿಸಲಾಯಿತು. ಈಗ ಅದು ಸ್ವತಂತ್ರ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ಮರುಭೂಮಿ ಸಂಶೋಧನ ಸಂಸ್ಥೆ ಮತ್ತು ವ್ಯಾವಸಾಯಿಕ ಪ್ರಾಯೋಗಿಕ ಕೇಂದ್ರಗಳು ಸಂಶೋಧನೆ ನಡೆಸುತ್ತಿವೆ. ರಾಜ್ಯದಲ್ಲಿ 43 ಗ್ರಂಥಾಲಯಗಳೂ 5 ಪ್ರಾಚ್ಯವಸ್ತು ಸಂಗ್ರಹಾಲಯಗಳೂ ಇವೆ.

	ಕೃಷಿ ಮತ್ತು ಅರಣ್ಯ: ನೆವಾಡದಲ್ಲಿ ವ್ಯವಸಾಯ ಹೆಚ್ಚಾಗಿ ನೀರಾವರಿಯನ್ನ ಅವಲಂಬಿಸಿದೆ. 1974ರಲ್ಲಿ 90 ಲಕ್ಷ ಎಕರೆ ನೆಲ ವ್ಯವಸಾಯಕ್ಕೆ ಒಳಪಟ್ಟಿತ್ತು. ಇಲ್ಲಿ ಪಶುಪಾಲನೆಯೂ ಒಂದು ಪ್ರಮುಖ ಉದ್ಯೋಗ. ಎಲ್ಕೋ, ಹಂಬೋಲ್ಟ್ ಮತ್ತು ಲ್ಯಾಂಡರ್ ಕೌಂಟಿಗಳಲ್ಲಿ ದೊಡ್ಡ ಪಶುಪಾಲನ ಕ್ಷೇತ್ರಗಳಿವೆ. ನೆವಾಡದ ಒಟ್ಟು ಭಾಗದಲ್ಲಿ ಸೇ. 17ರಷ್ಟು. ಎಂದರೆ ಸುಮಾರು 1,20,00,00 ಎಕರೆಗಳಷ್ಟು ಪ್ರದೇಶದಲ್ಲಿ ಅರಣ್ಯಗಳಿವೆ. ಇದರಲ್ಲಿ 50,00,000 ಎಕರೆಗಳಿಗೂ ಹೆಚ್ಚು ಪ್ರದೇಶ ರಾಷ್ಟ್ರೀಯ ಅರಣ್ಯ. ಇಲ್ಲಿ ಖಾಸಗಿ ಅರಣ್ಯಗಳೂ ಉಂಟು. ಅವು ಸಣ್ಣ ಗಾತ್ರದ ಮರದ ಕೈಗಾರಿಕೆಗಳಿಗೆ ಆಧಾರವಾಗಿದೆ.

	ಗಣಿಗಾರಿಕೆ, ಕೈಗಾರಿಕೆ: ನೆವಾಡ ರಾಜ್ಯ ಅಮೆರಿಕದ ಅತ್ಯಂತ ವಿಪುಲ ಖನಿಜ ಸಂಪದ್ಯುಕ್ತ ಪ್ರದೇಶಗಳಲ್ಲೊಂದು. ಹ್ವೈಟ್‍ಪೈನ್ ಕೌಂಟಿಯಲ್ಲಿನ ರೂತ್ ಮೈನ್‍ನಲ್ಲಿರುವ ತೆರೆದ ಗುಂಡಿಯ ತಾಮ್ರದ ಗಣಿ ವಿಶ್ವದಲ್ಲೆಲ್ಲ ಅತ್ಯಂತ ದೊಡ್ಡದು. ಈ ರಾಜ್ಯದಲ್ಲಿ ತಾಮ್ರವೇ ಅಲ್ಲದೆ ಚಿನ್ನ, ಬೆಳ್ಳಿ, ಮ್ಯಾಂಗನೀಸ್ ಟಂಗ್‍ಸ್ಟನ್ ಅಂಟಿಮನಿ, ಪಾದರಸ ಮತ್ತು ಕಬ್ಬಿಣದ ನಿಕ್ಷೇಪಗಳು ವಿಪುಲವಾಗಿವೆ.

	1960ರ ದಶಕದಲ್ಲಿ ಕೈಗಾರಿಕೆಗಳು ಇಲ್ಲಿ ವಿಶೇಷವಾಗಿ ಅಭಿವೃದ್ಧಿ ಹೊಂದಿದುವು. ಇದರಿಂದ ಉದ್ಯೋಗಾವಕಾಶ ಸುಮಾರು ಸೇ. 60 ರಷ್ಟು ಹೆಚ್ಚಾಯಿತು. ದೊಡ್ಡ ಕೈಗಾರಿಕೆಗಳು ಕ್ಲಾರ್ಕ್ ಮತ್ತು ವಾಷೋ ಕೌಂಟಿಗಳಲ್ಲಿವೆ. ಇಲ್ಲಿಯ ಉದ್ಯಮಗಳಲ್ಲಿ ಮುಖ್ಯವಾದವು ಮೂಲಲೋಹಗಳು, ಸಿಮೆಂಟ್, ಕಲ್ಲು, ಗಾಜು, ಆಹಾರಪದಾರ್ಥ, ತಯಾರಾದ ಲೋಹಗಳು ಮತ್ತು ಯಂತ್ರಗಳು, ಮುದ್ರಣ ಮತ್ತು ಪ್ರಕಾಶಣ. ರಾಜ್ಯದ ಅತ್ಯಂತ ದೊಡ್ಡ ಕೈಗಾರಿಕಾಕೇಂದ್ರ ಹೆಂಡರ್‍ಸನ್. ನೆವಾಡದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆ 1955-1966ರಲ್ಲಿ ದ್ವಿಗುಣಗೊಂಡಿತು. ಹೂವರ್ ಮತ್ತು ಡೇವಿಸ್ ಕಟ್ಟೆಗಳಲ್ಲಿ ದೊಡ್ಡ ವಿದ್ಯುದುತ್ಪಾದನ ಕೇಂದ್ರಗಳಿಗೆ. ಇಷ್ಟಾದರೂ ವಿದ್ಯುಚ್ಛಕ್ತಿಯ ಅಭಾವವುಂಟು. ಬಾನ್‍ವಿಲ್ ಕಟ್ಟೆಯಲ್ಲಿ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯನ್ನು ವಾಯುವ್ಯ ನೆವಾಡದ  ಉಪಯೋಗಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಇಲ್ಲಿ ವಿದ್ಯುಚ್ಛಕ್ತಿ ಅಗ್ಗವಾಗಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ದೊರಕಿದೆ. 1950ರಲ್ಲಿ ಸಂಯುಕ್ತ ಸಂಸ್ಥಾನಗಳ ಪರಮಾಣು ಆಯೋಗ ನೆವಾಡದಲ್ಲಿ ಪರೀಕ್ಷಾಕೇಂದ್ರವನ್ನು ಸ್ಥಾಪಿಸಿದ್ದರಿಂದ ರಾಜ್ಯದಲ್ಲಿ ಉದ್ಯೋಗ ಆಕಾಶಗಳು ಹೆಚ್ಚಿವೆ. ತಾಂತ್ರಿಕ ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. ಲಾಸ್‍ವೇಗಸ್ ಪ್ರದೇಶದಲ್ಲಿ ಏರೋಸ್ಪೇಸ್, ಪರಿಸರ ರಕ್ಷಣೆ ಮತ್ತು ಎಲೆಕ್ಟ್ರಾನಿಕ್ಸ್ ಸಂಶೋಧನ ಕೇಂದ್ರಗಳೂ ಕೈಗಾರಿಕೆಗಳೂ ಸ್ಥಾಪಿತವಾಗಿವೆ. ಇದು ಭೂಗರ್ಭ ಪರಮಾಣು ಸ್ಫೋಟದ ಪ್ರಮುಖ ಕೇಂದ್ರ. ಇಲ್ಲಿ ಪರಮಾಣು ಕ್ಷಿಪಣಿ ಅಭಿವೃದ್ಧಿ ಕೇಂದ್ರವೂ ಇದೆ.

	ಸಾರಿಗೆ: ನೆವಾಡ ಭೌಗೋಳಿಕವಾಗಿ ಆಯಕಟ್ಟಿನ ಸ್ಥಳದಲ್ಲಿರುವುದರಿಂದ ಮತ್ತು ಈ ರಾಜ್ಯದ ಮೂಲಕ ಸಾಗುವ ವಸ್ತುಗಳಿಗೆ ಸುಂಕದ ವಿನಾಯಿತಿ ಇರುವುದರಿಂದ ದಾಸ್ತಾನುಗಾರಿಕೆ ಮತ್ತು ಸಾರಿಗೆ ಉದ್ಯಮಗಳು ಚೆನ್ನಾಗಿ ಅಭಿವೃದ್ದಿ ಹೊಂದಿವೆ. ಇಲ್ಲಿ 7 ರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆಗಳೂ ಅನೇಕ ಪೂರಕ ವ್ಯವಸ್ಥೆಗಳೂ ಇವೆ. ರಾಜ್ಯದಲ್ಲಿ 81 ವಿಮಾನ ನಿಲ್ದಾಣಗಳುಂಟು. ರಾಜ್ಯದ ಮೂಲಕ 3 ಪ್ರಮುಖ ರೈಲುಮಾರ್ಗಗಳು ಹಾದುಹೋಗುತ್ತವೆ. ಇವಲ್ಲದೆ ಅನೇಕ ಶಾಖಾಮಾರ್ಗಗಳೂ ಉಂಟು. ಅಂತರರಾಜ್ಯ ಹೆದ್ದಾರಿಗಳೂ ಪೌರ ಮತ್ತು ಗ್ರಾಮೀಣ ರಸ್ತೆಗಳ ಜಾಲವೂ ಇವೆ. ಇಲ್ಲಿಯ ಪ್ರಮುಖ ಸಾರಿಗೆ ಮತ್ತು ವ್ಯಾಪಾರಕೇಂದ್ರಗಳು ರೀನೋ (ವಾಯುವ್ಯ ಮತ್ತು ಈಶಾನ್ಯಭಾಗ), ಎಲ್ಕೋ, ಈಲೀ (ಈಶಾನ್ಯಭಾಗ), ಲಾಸ್ ವೇಗಸ್ (ದಕ್ಷಿಣ).
(ಜಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ